ಸ್ಟಾರ್ ವಿಥ್ ಸಿರಿ – ತಾರಾಅನುರಾಧಾ

ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ತಾರಾ ಅಭಿನಯಿಸದ ಪಾತ್ರಗಳಿಲ್ಲ. ತರ್‍ಲೆ ಮಾಡುವ ತಂಗಿಯಾಗಿ, ಗಾಂಭೀರ್ಯದ ಅಕ್ಕನಾಗಿ, ಆಪ್ತ ಗೆಳತಿಯಾಗಿ, ವಾತ್ಸಲ್ಯ ತೋರುವ ತಾಯಿಯಾಗಿ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡ ಪ್ರಬುಧ್ಧ ನಟಿ ಈಕೆ.
ಅನೀರೀಕ್ಷಿತವಾಗಿ ೧೯೮೫ರಲ್ಲಿ ’ತುಳಸೀದಳ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ  ಇವರು ’ಮಧುರ ಭಾಂಧವ್ಯ, ಸುಂದರ ಸ್ವಪ್ನಗಳು, ಸತ್ಕಾರ ಹೆಣ್ಣಿನ ಕೂಗು’, ಹೀಗೆ ಒನ್ ಬೈ ಒನ್ ಚಿತ್ರಗಳಲ್ಲಿ ನಟಿಸುತ್ತಾ, ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಹೀರೋಯಿನ್ ಆಗಿ ಹೊರಹೊಮ್ಮುತ್ತಾರೆ. ಆ ಚಿತ್ರ ಹಿಟ್ ಆಗುವುದಷ್ಟೇ ಅಲ್ಲ.., ಅದು ಇವರಿಗೆ ಹೊಸ ನಾಮಕರಣವನ್ನೇ ಮಾಡುತ್ತದೆ. ನಂತರದಲ್ಲಿ ಅನುರಾಧ ’ತಾರಾ’ ಆಗುತ್ತಾರೆ.
                ಕಾದಂಬರಿ ಆಧಾರಿತ ೨೨ ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಏಕೈಕ ನಟಿ  ಇವರಾಗಿದ್ದು ತಮ್ಮ ಅಭಿನಯಕ್ಕೆ ೫ ಕರ್ನಾಟಕ ರಾಜ್ಯ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಪಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ  ೨೦೦೫ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ’ಹಸೀನಾ’ ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ’ರಾಷ್ಟ್ರ ಪ್ರಶಸ್ತಿ’ಯನ್ನು ಪಡೆದ ಹೆಗ್ಗಳಿಕೆ ಇವರದು. ಹಸೀನಾ ಚಿತ್ರವನ್ನು ಅವರದೇ ’ಚಿಗುರು’ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಲಾಗಿದೆ ಎನ್ನುವುದು ಮತ್ತೊಂದು ವಿಶೇಷ.
                ಒಂದು ಕಡೆ ಬಣ್ಣದ ಬದುಕಾದರೆ ಇನ್ನೊಂದು ಕಡೆ ರಾಜಕೀಯದ ಬ್ಯುಸಿ ಜೀವನವೂ ಹೌದು… ಅವುಗಳ ಮಧ್ಯೆಯೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ತಾರಾ ಈ ಬಾರಿ ’ಸ್ಟಾರ್ ವಿಥ್ ಸಿರಿ’ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ಸಿನಿ ಬದುಕಿನ ಆರಂಭದಿಂದ ಇಲ್ಲಿಯವರೆಗೂ ಕಳೆದ ಅನುಭವ, ಬಾಲ್ಯದ ಬದುಕಿನ ಸೋಜಿಗ, ಎಲ್ಲವನ್ನು ಮನಬಿಚ್ಚಿ ಹಂಚಿಕೊಂಡಿದ್ದು ಹೀಗೆ…
ಹುಟ್ಟಿದ್ದು ಬೆಳೆದಿದ್ದೆಲ್ಲಾ ಶ್ರೀಮಂತಿಕೆಯಲ್ಲೆ:
ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ. ನನ್ನ ತಾತ ಡೆಪ್ಯುಟಿ ಕಮಿಷನರ್. ತಂದೆ ಚೀಫ್ ಜನರಲ್ ಮ್ಯಾನೇಜರ್. ನಮ್ಮದು ಒಂಥರಾ ಅಫೀಶೀಯಲ್ ಫ್ಯಾಮಿಲಿ. ಮನೆಯಲ್ಲಿರೋರೆಲ್ಲರೂ ಇಂಜಿನಿಯರಿಂಗ್ ಓದಿರೋರೆ. ನಾನು ಮಾತ್ರಾ ಕಡಿಮೆ ಓದಿರೋಳು. ಬಾಲ್ಯದಲ್ಲಿ ಚಿಕ್ಕಹೊಸಳ್ಳಿಯಲ್ಲಿದ್ದಾಗ ನಾಟಕ, ನೃತ್ಯ ಇತ್ಯಾದಿಗಳನ್ನೆಲ್ಲಾ ನೋಡೋಕೆ ಹೋಗ್ತಿದ್ವಿ ಆದರೆ ನಾನೆಂದು ನಾಟಕಗಳಲ್ಲಿ ಅಭಿನಯಿಸುವ ಗೋಜಿಗೆ ಹೋಗಿರಲಿಲ್ಲ. ನಮ್ಮದೊಂಥರ ಅಪ್ಪರ್ ಮಿಡಲ್ ಫ್ಯಾಮಿಲಿ ಅಂತ ಹೇಳಬಹುದು. ನನಗೆ ಯಾವುದಕ್ಕೂ ಕಡಿಮೆ ಇರಲಿಲ್ಲ. ಆದರೆ ನನ್ನನ್ನ ಬಹಳ ಜನ ಬಡತನದಿಂದ ಬಂದವಳು ಅಂತ ಅಂದುಕೊಂಡಿದ್ದಾರೆ. ಖಂಡಿತ ಇಲ್ಲ… ಶ್ರೀಮಂತಿಕೆಯಲ್ಲೇ ಬೆಳೆದವಳು ನಾನು.
ಪಿ.ಯು.ಸಿ ಮುಗಿಯುವಷ್ಟರಲ್ಲಿ ೫೦ ಸಿನಿಮಾ ಮಾಡಿದ್ದೆ:
೭ನೇ ತರಗತಿಯ ಪರೀಕ್ಷೆ ಮುಗಿದು ರಜೆ ಸಿಕ್ಕ ಸಂಧರ್ಭ ನಾನು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದೆ. ಚಿಕ್ಕ ವಯಸ್ಸು ನನ್ನದು. ನಾನು ಮೊದಲು ಬಣ್ಣ ಹಚ್ಚಿದ್ದು, ’ತುಳಸೀದಳ’ ಎನ್ನುವ ಚಿತ್ರಕ್ಕೆ. ಅದಾದ ನಂತರ ’ಸುಂದರ ಸ್ವಪ್ನ, ತಾಯಿಯ ಮನೆ’ ಚಿತ್ರಗಳಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಓದುತ್ತಿದ್ದ ರಜಾ ದಿನಗಳಲ್ಲಿ ನಟಿಸಿದ್ದೆ. ಪಿ.ಯು.ಸಿ ಮುಗಿಯುವಷ್ಟರಲ್ಲಿ ಫೇಮಸ್ ಆರ್ಟಿಸ್ಟ್ ಆಗಿದ್ದೆ. ನಂತರ ಬಂದ ’ಆನಂದ್’ ಚಿತ್ರದಲ್ಲಿ ಅವಕಾಶ ಸಿಕ್ತು. ಆ ಚಿತ್ರ ನನ್ನ ಮೊದಲ ಹಿಟ್ ಸಿನಿಮಾ ಎನ್ನಬಹುದು. ಅಲ್ಲಿಂದ ಫುಲ್ ಬ್ಯುಸಿ ಆದೆ. ಸಿನಿಮಾಗಳು ಜಾಸ್ತಿಯಾದ್ದರಿಂದ ಓದು ನಿಲ್ಲಿಸಿದೆ. ತಂದೆಗೆ ಸ್ವಲ್ಪ ಬೇಸರ ಇತ್ತು. ನಾನೇ ಮನೆಗೆ ಹಿರಿಯ ಮಗಳಾದ್ದರಿಂದ ನನಗೆ ತುಂಬಾ ಓದಿಸಬೇಕೆಂಬ ಆಸೆ ಅವರಿಗಿತ್ತು.
ಅವಕಾಶ ಸಿಕ್ಕಿದ್ದು:
ನನಗೆ ಸಿನಿಮಾ ಫೀಲ್ಡ್‌ಗೆ ಬರಲು ಸಹಾಯ ಮಾಡಿದ್ದು ನನ್ನ ದೊಡ್ಡಮ್ಮ ಮತ್ತು ತಾತ. ತಂದೆ ತಾಯಿ ಇಬ್ಬರಿಗೂ ಇಷ್ಟವಿರಲಿಲ್ಲ. ನಮ್ಮದು ಕೂಡುಕುಟುಂಬ ಸುಮಾರು ೪೫ ಮಂದಿ ಒಂದೇ ಮನೆಯಲ್ಲಿದ್ದೆವು. ಮಕ್ಕಳೆಲ್ಲರಿಗೂ ಚಿಕ್ಕಂದಿನಲ್ಲೇ ಸ್ವಿಮ್ಮಿಂಗ್, ಡಾನ್ಸ್ ಸೇರಿದಂತೆ ಅನೇಕವುಗಳನ್ನು ಕರಗತಮಾಡಿಸುತ್ತಿದ್ದರು  ಅವನ್ನೆಲ್ಲಾ ಕಲಿಸೋಕೆ ರಾಮಣ್ಣ ಅಂತ ಒಬ್ಬರು ನಮ್ಮನೆಗೆ ಬರುತ್ತಿದ್ದರು. ಅವರಿಂದ ಪಿ.ಸಿ ಸುಬ್ರಮಣ್ಯ ಎಂಬುವವರಿಗೆ ನಮ್ಮ ಪರಿಚಯವಾಯಿತು. ಪುಟ್ಟಣ್ಣ ಕಣಗಾಲ್ ರ ಸಿನಿಮಾಗೆಲ್ಲಾ ನೃತ್ಯ ಸಂಯೋಜನೆ ಪಿ.ಸಿ ಸುಬ್ರಮಣ್ಯರವರೇ ಮಾಡುತ್ತಿದ್ದರು. ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ’ಸಂಘ್ಯಾಬಾಳ್ಯ’ ಚಿತ್ರದಲ್ಲಿ ನನಗೊಂದು ಅವಕಾಶ ಕೊಟ್ರು. ಅಮೇಲೆ ’ತುಳಸೀದಳ’ ಚಿತ್ರದಲ್ಲಿ ನಡುವಯಸ್ಸಿನ ಹುಡುಗಿ ಪಾತ್ರಕ್ಕೆ ಒಬ್ಬಳು ಹುಡುಗಿ ಹುಡುಕುತ್ತಿದ್ದಾಗ ಅಲ್ಲಿ ನನ್ನಾಯ್ಕೆ ಆಯಿತು. ಹೀಗೆ ಒಂದೊಂದೆ ಅವಕಾಶ ದೊರಕುತ್ತಾ ಸಾಗಿತು.
ನಾಟಕ ಹಿನ್ನಲೆಯಿಲ್ಲದಿದ್ದರೂ ಸಿನಿಮಾ ಅಭಿನಯ ಕಷ್ಟವಾಗಲಿಲ್ಲ:
ನನಗೆ ಸಿನಿಮಾ ಅಭಿನಯ ಕಷ್ಟ ಅನಿಸಲಿಲ್ಲ. ಹಾಗೆಯೇ ಸಿನಿಮಾ ಕ್ಷೇತ್ರದಲ್ಲಿ ಯಾರು ಕಷ್ಟ ಕೊಡಲೂ ಇಲ್ಲ. ನಮ್ಮ ತಂದೆಯವರು ಎಲ್ಲರಿಗೂ ಗೊತ್ತಿದ್ದರಿಂದ  ಅವರಿಗೆ ಕೊಡುವಂತೆ ನನಗೂ ರೆಸ್ಫೆಕ್ಟ್ ಕೊಡುತ್ತಿದ್ದರು. ನನಗೆ ಮೊದ ಮೊದಲು ಈ ಸಿನಿಮಾ ರಂಗದಲ್ಲಿ ನಡೆಯುವ ಪೊಲಿಟಿಕ್ಸ್‌ಗಳು ಅಷ್ಟಾಗಿ ಗೊತ್ತಿರಲಿಲ್ಲ. ಅವುಗಳ ಬಗ್ಗೆ ತಲೆಕೆಡಿಸಿಕೊಂಡೂ ಇರಲಿಲ್ಲ. ನನ್ನ ದೊಡ್ಡಮ್ಮನೇ ನನ್ನನ್ನು ಸಿನಿಮಾ ಸೆಟ್ ನಲ್ಲಿ ನೋಡಿಕೊಳ್ಳುತ್ತಿದ್ದರಿಂದ ನನಗೆ ಈ ಒಳಜಗತ್ತಿನ ಅರಿವು ಗೊತ್ತಾಗಿರಲಿಲ್ಲ. ಆಮೇಲೆ ದಿನ ಕಳೆದಂತೆ ಒಂದೊಂದೆ ತಿಳಿಯಲು ಆರಂಭವಾಯಿತು.
ಹೀರೋ ಹೀರೋಯಿನ್‌ಗೆ ಬೇರೆ ಊಟ, ಸಪೋರ್ಟ್ ರೋಲ್ ಮಾಡೋರಿಗೆ ಬೇರೆ ಊಟ, ಅವರಿಗೆ ಬೇರೆ ಥರದ ಬಟ್ಟೆ ನಮಗೆ ಬೇರೆ ಥರದ ಬಟ್ಟೆ .., ಇದೆಲ್ಲಾ ನೋಡಿ ಬೇಜಾರಾಗ್ತಿತ್ತು… ಆ ಮೇಲು ಕೀಳುಗಳನ್ನು ನೋಡಿ ಅದೆಷ್ಟೋ ಸಲ ಬೇಜಾರು ಮಾಡಿಕೊಂಡು ಕೋಪ ಮಾಡಿಕೊಂಡು ಸುಮ್ಮನೆ ಕುಳಿತಿದ್ದು ಇದೆ. ಆದರೆ ನಟನೆ ವಿಚಾರದಲ್ಲಿ ನನಗ್ಯಾವ ಕಷ್ಟವೂ ಸುಳಿದಿಲ್ಲ.
ಅತೀ ಹೆಚ್ಚು ಆರ್ಟ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನಗೆ:
ಚಿಕ್ಕಂದಿನಿಂದಲೂ ಆರ್ಟ್ ಸಿನಿಮಾಗಳಲ್ಲಿ ನನಗೆ ಅವಕಾಶ ಸಿಗುತ್ತಲೇ ಬಂತು. ಆದರೆ ಆಗೆಲ್ಲಾ ಅದು ಆರ್ಟ್, ಇದು ಕಮರ್ಷಿಯಲ್ ಎನ್ನುವುದೆಲ್ಲಾ ನನಗೆ ತಿಳಿದಿರಲಿಲ್ಲ. ಬರಗೂರು ರಾಮಚಂದ್ರಪ್ಪನವರು ನಮ್ಮ ತಾತನ ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಅವರಾಗ ’ಕೋಟೆ’ ಎನ್ನುವ ಸಿನಿಮಾ ಮಾಡುತ್ತಿದ್ದರು. ಅವರ ಹೆಂಡತಿಯ ಊರಾದ ಮಧುಗಿರಿಯಲ್ಲಿ ಶೂಟಿಂಗ್ ಇತ್ತು. ಅದು ನನ್ನ ಮೊದಲ ಆರ್ಟ್ ಮೂವಿ. ಆದರೆ ನನಗದು ಆರ್ಟ್ ಸಿನಿಮಾ ಅನ್ನೋದೇ ತಿಳಿದಿರಲಿಲ್ಲ. ಮೈ ಕೈಗೆ ಕೂದಲಿಗೆಲ್ಲಾ ಮಣ್ಣನ್ನು ಹಚ್ಚುತ್ತಿದ್ದರು. ’ಸಿನಿಮಾ ಅಂತೀರಾ ಈ ಥರ ಎಲ್ಲಾ ಮಣ್ಣು ಹಚ್ತಾರಾ’ ಅಂತೆಲ್ಲಾ ಕೇಳುತ್ತಿದ್ದೆ. ಆ ಸಿನಿಮಾ ಚಿತ್ರೀಕರಣ ಮುಗಿದ ನಂತರ ಗೊತ್ತಾಯ್ತು ಕಮರ್ಷಿಯಲ್ ಸಿನಿಮಾ ಮಾಡೋದೆ ಬೇರೆ, ಆರ್ಟ್ ಸಿನಿಮಾ ಮಾಡೋದೇ ಬೇರೆ. ಆರ್ಟ್ ಮೂವಿಯಲ್ಲಿ ಮೊದಲೇ ರಿಹರ್ಸಲ್ ಇರ್‍ತಿತ್ತು, ಕಮರ್ಷಿಯಲ್ ಎಂದರೆ ಶೂಟಿಂಗ್ ಸ್ಥಳಕ್ಕೆ ಬಂದು ಅಲ್ಲೇ ಡೈಲಾಗ್ ಕೇಳಿ ಅಲ್ಲೇ ಡೆಲಿವರಿ ಮಾಡೋದು ಆಗ್ತಿತ್ತು. ಅಲ್ಲಿಂದ ’ಕರಡಿಪುರ, ಹಗಲುವೇಷ’ ಹೀಗೆ ಒಂದೊಂದೆ ಸಿನಿಮಾ ಮಾಡಿದೆ. ಆನಂತರ ’ಕಾನೂರು ಹೆಗ್ಗಡಿತಿ’ಯಲ್ಲಿ ಅಭಿನಯಿಸಿದೆ. ಅದು ನನಗೆ ಒಳ್ಳೆ ಬ್ರೇಕ್ ನೀಡಿತು.
ಕಾನೂರು ಹೆಗ್ಗಡಿತಿಯೊಂದು ವಿಶೇಷನುಭವ:
ಕಾನೂರು ಹೆಗ್ಗಡತಿ ಸಿನಿಮಾ ನನಗೆ ಬ್ರೇಕ್ ಮಾತ್ರಾವಲ್ಲದೇ ಅನೇಕಾನೇಕ ವಿಶೇಷ ಅನುಭವಗಳನ್ನು ನೀಡಿದೆ. ತೀರ್ಥಹಳ್ಳಿಯಲ್ಲಿ ಅದರ ಶೂಟಿಂಗ್ ಇತ್ತು. ಅಲ್ಲಿನವರಿಗೆ ಕುವೆಂಪು ದೇವರು. ನಾನು ನಿರ್ವಹಿಸಿದ ಹೆಗ್ಗಡಿತಿ ಪಾತ್ರವನ್ನು ನೋಡುತ್ತಿದ್ದ್ದ ಎಲ್ಲರೂ ನನ್ನನ್ನು ’ಹೆಗ್ಗಡಿತಿ’ ಅಂತಲೇ ಕರೆಯೋಕೆ ಶುರುವಿಟ್ಟಿದ್ದರು. ಒಂದಿನವೂ ಒಬ್ಬರೂ ನನ್ನನ್ನು ’ತಾರಾ’ ಅಂತ ಕರೆದೇ ಇಲ್ಲ. ಆ ಚಿತ್ರದ ಶೂಟಿಂಗ್‌ಗೂ ಮುಂಚೆ ನಾನು ತುಂಬಾ ದಪ್ಪಗಿದ್ದೆ. ಕಾರ್ನಾಡರು ಮೊದಲು ನನ್ನ ನೋಡಿ ತೂಕ ಇಳಿಸಿಕೋ ಎಂದಿದ್ದರು.. ಆಮೇಲೆ ’ಕಾನೂರು ಹೆಗ್ಗಡಿತಿ’ ಪುಸ್ತಕವನ್ನು ಓದಲು ಕೊಟ್ಟಿದ್ದರು. ಸಿನಿಮಾ ಶೂಟಿಂಗ್ ಮಧ್ಯೆ ಮಧ್ಯೆ ಲೆಕ್ಚರ್‌ಗಳು ಇರುತಿದ್ವು. ರಿಹರ್ಸೆಲ್‌ಗಳನ್ನು ಮಾಡಿಕೊಳ್ಳುತ್ತಿದ್ವಿ. ಕನ್ನಡದಲ್ಲಿ ನಾನು ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಭಾಗೀರಥಿಯಂತ ಒಬ್ಬರು ನಿರ್ವಹಿಸಿದ್ದರು…
ನನ್ನದೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಇನ್ನೂ ಸಂತೋಷ :
ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯುವುದು ನಿಜಕ್ಕೂ ಹೆಮ್ಮೆಯ ವಿಚಾರ. ಎಲ್ಲಾ ಕಲಾವಿದರಿಗೂ ಈ ಭಾಗ್ಯ ಸಿಗುವುದಿಲ್ಲ. ಅದರಲ್ಲೂ ನಾನೇ ನಿರ್ಮಿಸಿ ಅಭಿನಯಿಸಿದ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಹೇಳಲಾರದ ಸಂತೋಷ. ’ಹಸೀನಾ’ ಚಿತ್ರವನ್ನು ಮಾಡೋವಾಗಲೇ ಪ್ರಶಸ್ತಿ ಮೆಟ್ಟಿಲೇರಬಹುದೇನೋ ಎನ್ನುವ ನಂಬಿಕೆಯಿತ್ತು. ಆದರೆ ಆ ವರ್ಷ ಕಾಂಪಿಟೇಷನ್ ಜಾಸ್ತಿಯಿತ್ತು. ಐಶ್ವರ್ಯ ರೈ, ರಾಣಿ ಮುಖರ್ಜಿ ಮಂಜು ಅಳಿಯಾರ್ ಸೇರಿದಂತೆ ಘಟಾನುಘಟಿಯರೆಲ್ಲಾ ಒಂದೇ ಸಾಲಿನಲ್ಲಿದ್ದರು. ಪ್ರಶಸ್ತಿ ಅನೌನ್ಸ್ ಆದ ದಿನವಂತೂ ನಾನು ನಂಬೋಕೆ ಆಗಲಿಲ್ಲ. ಯಾರೋ ಮೊದಲೇ ಐಶ್ವರ್ಯ ರೈ ಗೆ ಬಂತು ಅಂದ್ರು. ಆಮೇಲೆ ಅವರಿಗಲ್ಲ ನಿಮಗೆ ಅಂದ್ರು. ಆ ಕ್ಷಣ ಮರೆಯಲಾಗದು. ಬೆಸ್ಟ್ ಹೀರೋಯಿನ್, ಬೆಸ್ಟ್ ಸ್ಟೋರಿ, ಬೆಸ್ಟ್ ಕಾಸ್ಟ್ಯೂಮ್ ಹೀಗೆ ಮೂರು ಪ್ರಶಸ್ತಿಗಳನ್ನು ನಮ್ಮ ತಂಡ ಬಾಚಿಕೊಂಡಿತು. ನನ್ನ ಮದುವೆಯಾಗಿ ಐದು ತಿಂಗಳಲ್ಲಿ ಆ ಪ್ರಶಸ್ತಿ ಬಂದಿತ್ತು. ಅನೇಕರು ಅಯ್ಯೋ ತಾರಾ ನಿನ್ನ ಗಂಡನ ಕಾಲ್ಗುಣ ಚಂದವಿದೆ ಕಣೇ ಅಂತಲೂ ನನ್ನ ರೇಗಿಸ್ತಿದ್ರು.
ನಟನೆ ನನ್ನ ಜೀವ… ಸಾಯೋವರೆಗೂ ಅದನ್ನು ಬಿಡಲಾರೆ:
ಇಲ್ಲಿಗೆ ಎಲ್ಲರ ವಿರೋಧ ಕಟ್ಟಿಕೊಂಡೆ ಬಂದಿದ್ದು. ಮನೆಯವರಿಗೆ ಇಷ್ಟವೇ ಇರಲಿಲ್ಲ. ಆದರೆ ಇಂದು ಸಿನಿಮಾ ನನಗೆ ಎಲ್ಲವನ್ನು ಕೊಟ್ಟಿದ್ದೆ. ಹೆಸರು, ಬದುಕು, ಜೀವನ, ಗೌರವ, ಗಂಡ, ಮನೆ, ಹೀಗೆ ಎಲ್ಲವೂ… ನನಗಿಂದು ಯಾವ ಗೌರವ ಸಿಗುತ್ತಿದ್ದರೂ ಅದೆಲ್ಲವೂ ಸಿನಿಮಾಗಳಿಂದಲೇ ಎಂದರೆ ತಪ್ಪ್ಪಿಲ್ಲ. ಒಬ್ಬ ಕಲಾವಿದೆಯಾಗಿ ನನಗೆ ಎಲ್ಲಾ ಸ್ಥಾನಮಾನವೂ ಲಭಿಸಿದೆ. ನಾನು ಸಾಯೋವರೆಗೂ ಕಲಾವಿದೆಯಾಗಿಯೇ ಇರಲು ಇಷ್ಟ ಪಡುತ್ತೇನೆ. ನಟನೆ ನನ್ನ ಜೀವ, ಅದನ್ನೆಂದಿಗೂ ಬಿಡುವುದಿಲ್ಲ. ನಾನೊಬ್ಬ ನಟಿ ಎಂದುಕೊಳ್ಳಲು ಹೆಮ್ಮೆ ಪಡುತ್ತೇನೆ ಹೊರತು ಬೇರ್‍ಯವುದರಿಂದಲೂ ಅಲ್ಲ.
ತಮಿಳಿನಿಂದ ’ತಾರಾ’ ಬಂತು:
ನನ್ನ ಮೊದಲ ಹೆಸರು ಅನುರಾಧ. ’ಸುಂದರ ಸ್ವಪ್ನ’ ಚಿತ್ರವನ್ನು ಮುಗಿಸಿದ ಮೇಲೆ  ನನಗೆ ತಮಿಳು ಚಿತ್ರಗಳಿಂದ ಆಫರ್ ಬಂತು. ನನ್ನನ್ನು ಹೀರೋಯಿನ್ ಮಾಡಿದ್ದು ಮೊದಲು ತಮಿಳು ಚಿತ್ರರಂಗ. ನನ್ನ ಮೊದಲ ತಮಿಳು ಚಿತ್ರದ ( ಇಂಗ್ಯಮ್ ಊರು ಗಂಗೈ) ನಟನೆಯ ಸಂಧರ್ಭ ನಿರ್ಮಾಪಕ ಕಲೈಮಾಮಣಿಯವರು ನನಗೆ ನಿಮ್ಮ ಮೂಲ ನಾಮ ಬೇಡ ಹೊಸದೊಂದು ಹೆಸರು ಇಡೋಣವೆಂದು ಜಾತಕ ನೋಡಿ ಮೊದಲು ’ದಿವ್ಯಾ’ ಅಂತ ಹೆಸರಿಟ್ಟರು ಆಮೇಲೆ ಅದು ಬೇಡವೆಂದು ’ತಾರಾ’ ಅಂತ ನಾಮಧ್ಯೇಯ ಮಾಡಿದರು. ಅಲ್ಲಿಂದ ನನ್ನ ಹೆಸರು ’ತಾರಾ’ ಅಂತಾಯ್ತು. ಆದರೆ ನನ್ನ ಸರ್ಟಿಫೀಕೇಟ್‌ಗಳಲೆಲ್ಲವೂ ’ಅನುರಾಧಾ’ ಅಂತಾನೆ ಇರುವುದರಿಂದ, ಮುಂದೆ ರಾಜಕೀಯಕ್ಕೆ ಬಂದ ಮೇಲೆ ಅವೆರಡು ಮಿಕ್ಸ್ ಆಗಿ ತಾರಾನುರಾಧ ಆಯ್ತು. ಈಗ ಮದುವೆಯಾದ ಮೇಲೆ ತಾರಾವೇಣು ಅಂತಲೂ ಕೆಲವರು ಕರೆಯುತ್ತಾರೆ.
ರಾಜಕೀಯದಲ್ಲಿ ಎಂ.ಎಲ್.ಸಿ ಆಗಿ:
ನಾನು ರಾಜಕೀಯಕ್ಕೆ ಬರುತ್ತೇನೆಂದುಕೊಂಡಿರಲಿಲ್ಲ. ಸುಮಾರು ವರ್ಷಗಳಿಂದಲೂ ಅಂಬರೀಶ್, ಜಯಂತಿ, ವಜ್ರಮುನಿ ಹೀಗೆ ಅನೇಕರು ರಾಜಕೀಯಕ್ಕೆ ಸ್ಫರ್ಧಿಗಳಾಗಿ ನಿಂತಿದ್ದಾಗ ಅವರ ಪರವಾಗಿ ಪ್ರಚಾರಕ್ಕೆ ನಾನು ಭಾಗವಹಿಸುತ್ತಿದ್ದೆ. ವರ್ಷಗಳ ಹಿಂದೆಯೇ ನನ್ನ ತಾತನ ಮನೆಯಲ್ಲಿ ಕೃಷ್ಣಯ್ಯ ಎನ್ನುವವರ ಚಿಕ್ಕಮ್ಮ ಬಾಡಿಗೆಗಿದ್ದರು. ಕೃಷ್ಣಯ್ಯನವರು ಆಗಲೇ ಮಿನಿಸ್ಟರ್ ಆಗಿದ್ದರು. ಚಿಕ್ಕಮ್ಮ ಯಾವಾಗಲೂ ನೀನು ಮಿನಿಸ್ಟರ್ ಆಗಬೇಕು, ನಿನ್ನೂ ಮಿನಿಸ್ಟರ್ ಮಾಡ್ತೀನಿ ಹಾಗೇ ಹೀಗೆ ಅನ್ನುತ್ತಲೇ ಇದ್ದರು. ಆದರೆ ನಾನಿದಾವುದನ್ನು ತಲೆಗೆ ಹಾಕಿಕೊಂಡಿರಲೇ ಇಲ್ಲ. ಅಂತೂ ಕೊನೆಗೆ ೨೦೦೮ರಲ್ಲಿ ಬಿ.ಜೆ.ಪಿ ಪಾರ್ಟಿಗೆ ಸೇರುವ ಅವಕಾಶ ಬಂತು. ೨೦೧೨ರ ಮಾರ್ಚ್‌ನಲ್ಲಿ ನಾನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷಳೂ ಆದೆ. ಅದಾಗಿ ಸ್ವಲ್ಫ ದಿನ ಅಂದರೆ ಅಗಸ್ಟ್ ೨೪ ರಂದು ನನ್ನನ್ನು ಎಂ.ಎಲ್.ಸಿ ಮಾಡಿದ್ರು. ಅಂದಿನಿಂದ ಇಂದಿನವರೆಗೂ ರಾಜಕೀಯ ಬದುಕು ಸಾಗುತ್ತಲೇ ಇದೆ. ನನಗೆ ಇಲ್ಲಿ ಅವರು ಇವರೆನ್ನುವ ಭೇಧ ಭಾವವಿಲ್ಲ. ಎಲ್ಲರೂ ನಾಯಕರೇ. ಸಮಾಜಕ್ಕೆ ಸಹಾಯ, ಅನ್ಯಾಯದ ವಿರುದ್ಧ ಹೋರಾಟ, ಇತ್ಯಾದಿಗಳೆಲ್ಲವೂ ನಡೆಸುತ್ತಲೇ ಇದ್ದೇನೆ. ನನ್ನ ಸಮಾಜ ಸೇವೆ ಯಾವಾಗಲೂ ನಡೆಯುತ್ತಲೇ ಇರುತ್ತದೆ.
ಕೈವಾರ ತಾತಯ್ಯ ಅನಾಥಾಶ್ರಮ:
ನಾನು ದುಡಿಯುತ್ತಿದ್ದ ದುಡ್ಡನ್ನು ಯಾರು ತೆಗೆದುಕೊಳ್ತಾ ಇರಲಿಲ್ಲ. ಅಂದರೆ ನಮ್ಮನೇಲಿ ಯಾರಿಗೂ ಹಣದ ಅವಶ್ಯಕತೆ ಇರಲಿಲ್ಲ. ಸುಮ್ಮನೇ ದುಡಿದಿದ್ದಕ್ಕೆಲ್ಲಾ ಇನ್ ಕಮ್ ಟ್ಯಾಕ್ಸ್ ಕಟ್ಟುತ್ತಿದ್ದೆ. ಅದೇ ಸಂಧರ್ಭ ಶಾಂತಲಾ ಅಂತ ಹಿಂದಿ ಟೀಚರ್ ಒಬ್ರೂ ಮಕ್ಕಳಿಗಾಗಿ ಅನಾಥಾಶ್ರಮ ಮಾಡೋ ಪ್ಲಾನ್ ಹೇಳಿದ್ರು. ನಾನು ನೋಡಿ ಕೊಳ್ತೇನೆ ನೀವು ಹಣ ಕೊಡಿ ಅಂದ್ರು. ಸುಮ್ಮನೆ ದುಡ್ಡು ಹಾಳಾಗುವುದಕ್ಕಿಂತ ಬಡ ಮಕ್ಕಳಿಗಾದರೂ ಏನಾದರೂ ಮಾಡೋಣವೆಂದು ’ಕೈವಾರ ತಾತಯ್ಯ’ ಎಂಬ ಹೆಸರಿನಿಂದ ಒಂದು ಮನೆ ಬಾಡಿಗೆ ಪಡೆದು ಅನಾಥ ಮಕ್ಕಳನ್ನು ಸಲಹಲು ನಿಂತೆ. ಪ್ರಾರಂಭದಲ್ಲಿ ೧೨ ಮಕ್ಕಳಿದ್ದದ್ದು ನಂತರ ೪೨ ಮಕ್ಕಳ ಬೃಹತ್ ಸಂಖ್ಯೆಯೇ ಆಯಿತು. ಅದರ ಹೊಣೆಗಾರಿಕೆಯೂ ಜಾಸ್ತಿಯಾಯ್ತು. ನಾವು ನಮ್ಮ ಸಂಸ್ಥೆಯನ್ನು ರಿಜಿಸ್ಟರ್ ಮಾಡದೇ ಇದ್ದದ್ದರಿಂದ ಸರ್ಕಾರದಿಂದಲೂ ಯಾವ ಅನುಧಾನವೂ ಸಿಗುತ್ತಿರಲಿಲ್ಲ… ವರ್ಷ ಕಳೆದಂತೆ ಹಣಕಾಸಿಗೆ ಕಷ್ಟವಾಗತೊಡಗಿತು. ೧೯೯೨ರಿಂದ ೧೯೯೫ ರವರೆಗೆ ಅದನ್ನು ನಡೆಸಿಕೊಂಡು ಬಂದೆವು ನಂತರ ರಮಣಶ್ರೀ ಆಶ್ರಮಕ್ಕೆ ಆ ಜವಾಬ್ಧಾರಿ ವಹಿಸಿದೆವು.
ಕಿರುತೆರೆಗೆ ಎಂಟ್ರೀ:
ಸುಮಾರು ಜನಗಳ ಹೊಸ ಹೊಸಬರ ಹಟ ಇದು. ನಾನು ಕಿರುತೆರೆಗೆ ಬರಬೇಕು ಎನ್ನುವ ಆಸೆ ಅನೇಕರಿಗೆ ಇದೆ. ಆದರೆ ಸದ್ಯ ಅಷ್ಟು ಸಮಯ ನನ್ನಲ್ಲಿಲ್ಲ. ಕಿರುತೆರೆಯ ಧಾರಾವಾಹಿಗಳೆಂದರೆ, ತಿಂಗಳಲ್ಲಿ ೫ ರಿಂದ ೧೦ ದಿನ ಶೂಟಿಂಗ್‌ನಲ್ಲಿ ಇರಲೇಬೇಕಾಗುತ್ತೆ. ಅದು ಬಹಳ ಕಷ್ಟ. ಮಗ ಚಿಕ್ಕವನು. ಅವನನ್ನು ನೋಡಿಕೊಳ್ಳುವ ಜವಾಬ್ಧಾರಿ ಇದೆ. ಅಲ್ಲದೇ ಸದ್ಯದಲ್ಲೇ ಇಲೆಕ್ಷನ್ ಬರುತ್ತಿರುವುದರಿಂದ ಅಂತಹ ಯಾವ ನಿರ್ಣಯವಿಲ್ಲ. ಮುಂದೆ ಕಾಲ ಕೂಡಿ ಬಂದರೆ ನೋಡಬೇಕು.
’ಭರ್ಜರಿ’ ಪಾತ್ರವಿದೆ:
ಸುಮಾರು ದಿನಗಳ ಬಿಡುವಿನಿಂದ ಇದೀಗ ’ಮಡಾಮಕ್ಕಿ, ಗೋಲಿಸೋಡ ಹಾಗೂ ಭರ್ಜರಿ’ಯಲ್ಲಿ ಮತ್ತೆ ಬಣ್ಣ ಹಚ್ಚಿದ್ದೇನೆ. ಮಗ ಹಾಗೂ ರಾಜಕೀಯದ ಸಕ್ರೀಯತೆಯಿಂದ ಹೆಚ್ಚಿನ ಸಿನಿಮಾಗಳಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ’ಮಡಾಮಕ್ಕಿ ಹಾಗೂ ಗೋಲಿಸೋಡ’ ಗಳೆರಡು ಚಿತ್ರಗಳಲ್ಲೂ ಪಾತ್ರ ವಿಶೇಷವಾಗಿದೆ. ’ಭರ್ಜರಿ’ ಶೂಟಿಂಗ್ ನಡಿತಿದೆ. ’ಭರ್ಜರಿ’ಯಲ್ಲಿ ಪಟಪಟನೇ ಜಾಸ್ತಿ ಮಾತಾಡುವ ತಾಯಿ ಪಾತ್ರ. ಮಗನನ್ನು(ದ್ರುವ ಸರ್ಜಾ) ಸೋಲ್ಜರ್ ಮಾಡಬೇಕು ಎನ್ನುವ ಆಸೆ ಹೊತ್ತಿರುವ ತಾಯಿ, ಆದರೆ ಮಗ ಅದಕ್ಕೆ ಉಲ್ಟಾ ಆಗಿರುತ್ತಾನೆ. ಬಹಳ ಆಕ್ಟಿವ್ ರೋಲ್. ಆಮೇಲೆ ಇಮೋಷನಲ್‌ಗೆ ಟರ್ನ್ ಆಗುತ್ತೆ…
  • ಭವಿಷ್ಯತ್ತನ್ನು ನಾನು ಜಾಸ್ತಿ ಪ್ಲ್ಯಾನ್ ಮಾಡಿ ಬದುಕೊಲ್ಲ…
  • ರಾಜಕೀಯದಲ್ಲಿ ತೀರಾ ಒಳಗಡೆ ಇಳಿದಿಲ್ಲ. ನನಗಿಲ್ಲಿ ಎಲ್ಲರೂ ನಾಯಕರೆ. ಅವರು ಇವರೆಂಬ ಭೇಧ-ಭಾವವಿಲ್ಲ…
  • ಚಿಕ್ಕಂದಿನಲ್ಲಿ ನನ್ನ ಪೋಸ್ಟರ್ ನೋಡಿ ತುಂಬಾ ಖುಷಿಪಡ್ತಿದ್ದೆ… ಎಷ್ಟೋ ಸಲ ಅದನ್ನೇ ನೋಡುತ್ತಾ ರಸ್ತೆಯಲ್ಲಿ ನಿಂತುಬಿಡುತ್ತಿದ್ದೆ. ಆದರೆ ಇಂದು ಪೋಸ್ಟರ್ ನಲ್ಲಿ ಫೋಟೋ ಹಾಕ್ಭೇಡ್ರಪ್ಪಾ ಎನ್ನುತ್ತೇನೆ.
  • ಚಿಕ್ಕಂದಿನಲ್ಲಿ ಕಥೆ ಕೇಳದೆ ಕ್ಯಾರೆಕ್ಟರ್ ಬಗ್ಗೆ ಅರಿಯದೇ ಅನೇಕ ಬಾರಿ ಯಾವ್ಯಾವುದೋ ಇಷ್ಟವಿಲ್ಲದೇ ಇರೋ ಪಾತ್ರ ಮಾಡುವಂತಾಗಿ ಮೋಸ ಹೋಗಿದ್ದು ಇದೆ.
  • ಸಾಯೋವರೆಗೂ ಸಿನಿಮಾವನ್ನು ಬಿಡಲ್ಲ. ದುಡ್ಡಿಗಾಗಿ ಅಲ್ಲ ಅದು ನನ್ನ ಇಷ್ಟ.
  • ಮುಂದೆಯೂ ಸಿನಿಮಾ ನಿರ್ಮಾಣ ಮಾಡುವ ಆಸೆ ಇದೆ.
  • ಯಾರು ಹೇಳಲಿ ಬಿಡಲಿ ನಾನು ಸಮಾಜ ಸೇವೆ ಮಾಡುತ್ತಲೇ ಇರುತ್ತೇನೆ.
         ತಾರಾ ೧೯೮೮ರಿಂದ ಬಡ ಮಕ್ಕಳಿಗೆ ಉಚಿತ ನೋಟ್ಸ್ ಬುಕ್ ವಿತರಣೆ, ವೃದ್ಧರಿಗೆ ಶಾಲು ವಿತರಣೆ,  ಪೋಲೀಸ್ ಮತ್ತು ಪೌರ ಕಾರ್ಮಿಕರಿಗೆ  ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ತಂದೆ ಎಂ. ತ್ಯಾಗರಾಜುರವರ ಸ್ಮರಣಾರ್ಥ ಫುಟ್ಭಾಲ್ ಕ್ರೀಡಾಕೂಟವನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಫ್ರೌಢ ಶಾಲೆಯ ನಿರ್ಮಾಣಕ್ಕೆ ಚಿಕ್ಕಹೊಸಹಳ್ಳಿಯಲ್ಲಿ ೨ ಎಕ್ಕರೆ, ಆನೇಕಲ್ ಗ್ರಾಮದಲ್ಲಿ ದೇವಸ್ಥಾನದ ನಿರ್ಮಾಣಕ್ಕೆಂದು ೧.೫ ಎಕ್ಕರೆ ಭೂಮಿಯನ್ನು ಧಾನವಾಗಿಯೂ ನೀಡಿದ್ದಾರೆ. ನಿಜಕ್ಕೂ ಇವರು ಇಡೀ ಕರ್ನಾಟಕವೇ ಹೆಮ್ಮೆ ಪಡುವ ನಟಿ.  ಗಂಡ; ಎಚ್. ಸಿ ವೇಣುಗೋಪಾಲ್, ಮಗ ಶ್ರೀ ಕೃಷ್ಣ.
ಅಭಿನಯಿಸಿದ ಕನ್ನಡದ ಹಿಟ್ ಚಿತ್ರಗಳು:
ಗುರಿ, ಕಾನೂರು ಹೆಗ್ಗಡಿತಿ, ಶುಭ ಮಿಲನ, ಮುತ್ತೈದೆ, ಸಿ.ಬಿ.ಐ ಶಂಕರ್, ಅವಳೇ ನನ್ನ ಹೆಂಡ್ತಿ, ನಿಗೂಢ ರಹಸ್ಯ, ಸಿ.ಬಿ.ಐ ಶಿವ, ಕ್ರಮಾ, ಬೆಳ್ಳಿ ಕಾಲುಂಗುರ, ವಜ್ರಾಯುಧ, ಮುಂಜಾನೆಯ ಮಂಜು, ಆಪರೇಷನ್ ಅಂತ, ಆದಿತ್ಯಾ, ಯಾರೇ ನೀನು ಚೆಲುವೆ, ದಿಗ್ಗಜರು, ನಿನಗಾಗಿ, ಒಂದಾಗೋಣ ಬಾ,  ನಮ್ಮ ಬಸವ, ಹಸೀನಾ, ಸೈನೈಡ್, ಶ್ರೀ ಕ್ಷೇತ್ರ ಕೈವಾರ ತಾತಯ್ಯ, ಬಿರುಗಾಳಿ, ಸ್ಕೂಲ್ ಮೇಷ್ಟ್ರು, ಕಿರಾತಕ, ಭಾಗೀರಥಿ, ಕೆಂಪೇಗೌಡ, ಶ್ರಾವಣಿ ಸುಬ್ರಮಣ್ಯ, ಉಳಿದವರು ಕಂಡಂತೆ…